ಕಿಂಗ್ಸ್‍ಟನಿನ ಶ್ರೀಮಂತರು

 ಇಂಗ್ಲೆಂಡಿನ ಹಲ್‍ನದಿಯ ದಡದಲ್ಲಿರುವ ಚಾರಿತ್ರಿಕ ಮಹತ್ತ್ವವುಳ್ಳ ಕಿಂಗ್ಸ್‍ಟನ್ ನಗರದ ಅರ್ಲ್ ಮತ್ತು ಡ್ಯೂಕರ ಪರಂಪರೆ. ಮಧ್ಯಕಾಲೀನ ಬ್ರಿಟನಿನಲ್ಲಿ ರೂಢಿಗೆ ಬಂದು ಈಗಲೂ ಬಳಕೆಯಲ್ಲಿರುವ ಈ ಗೌರವ ಪದವಿಗಳಲ್ಲಿ ಅರ್ಲ್ ಪದವಿಗಿಂತಲೂ ಡ್ಯೂಕ್ ಪದವಿ ಹೆಚ್ಚಿನ ಮಟ್ಟದ್ದು.

 ರಾಬರ್ಟ್ ಪೀರ್‍ಪಾಂಟ್ (1584-1643) ಕಿಂಗ್ಸ್‍ಟನಿನ ಮೊದಲನೆಯ ಅರ್ಲ್‍ವಾಸ್ತವವಾಗಿ ಕಿಂಗ್ಸ್‍ಟನಿನ ಅರ್ಲ್ ಪದವಿಯನ್ನು 1628ರಲ್ಲಿ ಈತನಿಗಾಗಿಯೇ ಸೃಷ್ಟಿಸಲಾಯಿತು. ಇವನು ನಾಟಿಂಗ್‍ಹ್ಯಾಂಷೈರಿನ ಸರ್ ಹೆನ್ರಿ ಪೀರ್‍ಪಾಂಟನ ಮಗ. 1601ರಲ್ಲಿ ಈತ ನಾಟಿಂಗ್‍ಹ್ಯಾಂನಿಂದ ಪಾರ್ಲಿಮೆಂಟಿನ ಸದಸ್ಯನಾದ. 1627ರಲ್ಲಿ ಇವನನ್ನು ವೈಕೌಂಟ್ ನೆವಾರ್ಕ್ ಎಂದು ಗೌರವಿಸಲಾಯಿತು. ಅಂತರ್ಯುದ್ಧ ಪ್ರಾರಂಭವಾದಾಗ ಈತ ಅಲಿಪ್ತನಾಗಿಯೇ ಉಳಿಯಲು ಪ್ರಯತ್ನಿಸಿದನಾದರೂ 1643ರಲ್ಲಿ ರಾಜನ ಪಕ್ಷವನ್ನು ಸೇರಿಕೊಂಡ. ಆಗ ಈತನನ್ನು ಪೂರ್ವದೇಶಗಳ ಲೆಫ್ಟಿನೆಂಟ್ ಜನರಲ್ ಆಗಿ ನೇಮಿಸಲಾಯಿತು. ಆ ಸಂದರ್ಭದಲ್ಲಿ ಪಾರ್ಲಿಮೆಂಟ್ ಪಕ್ಷದವರು ಗೆಯ್ನ್ಸ್ ಬರೋದಲ್ಲಿ ಇವನ್ನು ಸೆರೆಹಿಡಿದು ಹಲ್‍ಗೆ ಕರೆದೊಯ್ಯುತ್ತಿದ್ದಾಗ. 1643ರಲ್ಲಿ ಜುಲೈ 25ರಂದು ಹಠಾತ್ತನೆ ಸಾವಿಗೆ ಈಡಾದ. ಈತನಿಗೆ ಹೆನ್ರಿ (1606-1680), ವಿಲಿಯಂ (ನಿಧನ: 1678) ಮತ್ತು ಫ್ರಾನ್ಸಿಸ್ (ನಿಧನ : 1659) ಎಂಬ ಮೂವರು ತಂಡು ಮಕ್ಕಳಿದ್ದರು. ವಿಲಿಯಂ ಮತ್ತು ಫ್ರಾನ್ಸಿಸ್ ಪಾರ್ಲಿಮೆಂಟಿನ ಪ್ರಮುಖ ಸದಸ್ಯರಾಗಿದ್ದರು. ಹಿರಿಯನಾದ ಹೆನ್ರಿ ಎರಡನೆಯ ಅರ್ಲ್ ಆದ. ಈತ ಅಕ್ಸ್‍ಬ್ರಿಜ್ ಸಂಧಾನಗಳಲ್ಲಿ ಮೊದಲನೆಯ ಚಾರಲ್ಸ್‍ನ ಪ್ರತಿನಿಧಿಯಾಗಿದ್ದ. 1645ರಲ್ಲಿ ಈತ ಪ್ರಿವಿ ಕೌನ್ಸಿಲಿನ ಸದಸ್ಯನಾದ; ಡಾರ್ಚೆಸ್ಟರಿನ ಮಾಕ್ರ್ವಿಸ್ ಎಂಬ ಗೌರವವೂ ದೊರಕಿತು. ಈತ 1647ರಲ್ಲಿ ಕಾಮನ್‍ವೆಲ್ತ್ ಆಳ್ವಿಕೆಯ ಕಾಲದಲ್ಲಿ ಹೆಚ್ಚು ಮೊತ್ತದ ದಂಡವನ್ನು ತೆತ್ತು ತನ್ನ ಪದವಿಯ ವಿಷಯದಲ್ಲಿ ಕರಾರು ಮಾಡಿಕೊಂಡು, ತರುವಾಯ ಲಂಡನಿಗೆ ತೆರಳಿ ನ್ಯಾಯಶಾಸ್ತ್ರ ಮತ್ತು ವೈದ್ಯಶಾಸ್ತ್ರಗಳನ್ನು ಅಭ್ಯಾಸಮಾಡಿದ. 1660ರಲ್ಲಿ ಮತ್ತೆ ಇವನನ್ನು ಪ್ರಿವಿ ಕೌನ್ಸಿಲಿನ ಸದಸ್ಯನಾಗಿ ನೇಮಿಸಲಾಯಿತು. 1666ರಲ್ಲಿ ನಾಟಿಂಗ್ ಹ್ಯಾಮಿನ ರೆಕಾರ್ಡರ್ (ಅಪರಾಧದ ಮತ್ತು ವ್ಯವಹಾರದ ನ್ಯಾಯಾಧಿಕಾರವುಳ್ಳವನಾಗಿ ಮೂರು ತಿಂಗಳಿಗೊಮ್ಮೆ ನ್ಯಾಯಸ್ಥಾನವನ್ನು ನಡೆಸುವ ಒಬ್ಬ ದಂಡಾಧಿಕಾರಿ) ಆಗಿ ಇವನನ್ನು ನೇಮಿಸಲಾಯಿತು. 1680ರಲ್ಲಿ ಈತ ನಿಧನಹೊಂದಿದಾಗ ಮಾಕ್ರ್ವಿಸ್ ಪದವಿಯ ಫಲವಾಗಿ ದೊರೆತಿದ್ದ ಇನಾಮತಿ ಭೂಸ್ವತ್ತು ಕೊನೆಗೊಂಡಿತು. ಅರ್ಲ್ ಪದವಿ ಮಾತ್ರ ಆನುವಂಶಿಕವಾಗಿ ಮುಂದುವರಿಯಿತು. ಅನುಕ್ರಮವಾಗಿ ಈ ವಂಶದ ರಾಬರ್ಟ್ (ನಿ. 1682), ವಿಲಿಯಂ (ನಿ. 1690) ಮತ್ತು ಎವೆಲಿನ್ (1665-1726) ಕ್ರಮಶಃ 3, 4 ಮತ್ತು 5ನೆಯ ಅರ್ಲ್‍ಗಳಾದರು.

 ಇವರಲ್ಲಿ 1665ರಿಂದ 1726ರ ವರೆಗೆ ಅಧಿಕಾರ ನಿರ್ವಹಿಸಿದ ಐದನೆಯ ಅರ್ಲ್‍ಎವೆಲಿನ್ ಮುಖ್ಯ. ಈತ ವ್ಹಿಗ್ ಪಕ್ಷದ ನಿಷ್ಠಾವಂತ ಸದಸ್ಯ. 1706ರಲ್ಲಿ ಮಾಕ್ರ್ವಿಸ್ ಆಫ್ ಡಾರ್ಚೆಸ್ಟರ್ ಪದವಿಯೂ 1708ರಲ್ಲಿ ಪ್ರಿವಿ ಕೌನ್ಸಿಲಿನ ಸದಸ್ಯತ್ವವೂ ಇವನಿಗೆ ದೊರಕಿದುವು. 1715ರಲ್ಲಿ ಕಿಂಗ್ಸ್‍ಟನಿನ ಡ್ಯೂಕ್ ಪದವಿಯೂ ದೊರಕಿತು. ಡ್ಯೂಕ್ ಪದವಿಯ ಮನ್ನಣೆಯನ್ನು ಪಡೆದ ಕಿಂಗ್ಸ್‍ಟನಿನ ಮೊದಲ ಅರ್ಲ್ ಈತನೇ. ಮುಂದೆ ಲಾರ್ಡ್ ಪ್ರಿವಿ ಕೌನ್ಸಿಲ್ ಮತ್ತು ಲಾರ್ಡ್ ಪ್ರೆಸಿಡೆಂಟ್ ಆಫ್ ದಿ ಕೌನ್ಸಿಲ್ ಎಂಬ ಗೌರವದ ಹುದ್ದೆಗಳನ್ನೂ ಈತ ನಿರ್ವಹಿಸಿದ. 1726ರ ಮಾರ್ಚಿ 5ರಂದು ಇವನು ತೀರಿಕೊಂಡ. ಈತನಿಗೆ ವಿಲಿಯಂ ಎಂಬ ಒಬ್ಬ ಮಗನೂ ಐವರು ಹೆಣ್ಣು ಮಕ್ಕಳೂ ಇದ್ದರು. ವಿಲಿಯಂ 1713ರಲ್ಲಿಯೇ ತೀರಿಕೊಂಡಿದ್ದದರಿಂದ, ಅವನ ಮಗನಾದ ಎವೆಲಿನ್ (1771-1773) ಎರಡನೆಯ ಮತ್ತು ಕೊನೆಯ ಡ್ಯೂಕ್ ಆಗಿ ಅಧಿಕಾರ ವಹಿಸಿಕೊಂಡ. ಇವನು ಕಟ್ಟಿದ ಸೇನೆ ಕುಲ್ಲೋಡೆನ್‍ನ ದಂಗೆಕೋರರನ್ನು ನಿಗ್ರಹಿಸಿ ವಿಶೇಷ ಖ್ಯಾತಿಗಳಿಸಿತು. 1755ರಲ್ಲಿ ಇವನನ್ನು ಜನರಲ್ ಹುದ್ದೆಗೆ ಏರಿಸಲಾಯಿತು. ಈತನ ಪ್ರಸಿದ್ಧಿಗೆ ಕಾರಣವಾದ ಮತ್ತೊಂದು ಸಂಗತಿ ಎಂದರೆ ಬ್ರಿಸ್ಟಲಿನ ಮಾಕ್ರ್ವಿಸ್ ಆಗಿದ್ದ ಎಲಿಜûಬೆತ್ ಚುಡ್ಲೇಯನ್ನು ವಿವಾಹವಾದ್ದು. ಇವನು 1773ರಲ್ಲಿ ಸಂತತಿಯಿಲ್ಲದೆ ಮೃತನಾದುದರಿಂದ ಕಿಂಗ್‍ಸ್ಟನಿನ ಈ ಶ್ರೀಮಂತ ಪದವಿ ಮುಂದುವರಿಯಲಿಲ್ಲ. 

 

    (ಪಿ.ಜಿ.ಡಿ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ